ಮೈಕೇಲ್, ಫೆರೀರಾ 
1938. - ಭಾರತದ ಬಿಲಿಯಡ್ರ್ಸ್ ಆಟಗಾರ. ಮುಂಬಯಿಯಲ್ಲಿ 1 ಅಕ್ಟೋಬರ್ 1938 ರಂದು ಜನಿಸಿದರು. ಇವರ ತಂದೆ ಜೋಸೆಫ್ ತಾಮಸ್ ಫೆರೀರಾ; ವಕೀಲರು. ತಾಯಿ ಎಚ್. ಮಿಯಾನ್ ಲೂಯಿಸ್. ಫೆರೀರಾ ಅವರು ಮುಂಬಯಿಯ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಬಿ. ಎ. ಪದವಿಯನ್ನೂ ಗೌರ್ನಮೆಂಟ್ ಲಾ ಕಾಲೇಜಿನಲ್ಲಿ ಎಲ್. ಎಲ್. ಬಿ. ಪದವಿಯನ್ನೂ ಪಡೆದರು. ಇವರು 1971-81ರ ತನಕ ಮುಂಬಯಿಯ ವೋಲ್ಟಾಸ್ ಕಂಪನಿಯಲ್ಲಿ ಕಾನೂನು ಸಲಹೆಗಾರರಾಗಿದ್ದರು. 1981ರಿಂದಲೂ ಟಾಟಾ ಆಯಿಲ್ ಮಿಲ್‍ನಲ್ಲಿ ಕಾನೂನು ಸಲಹೆಗಾರರಾಗಿದ್ದಾರೆ. ಇವರಿಗೆ ಬರೆವಣಿಗೆಯಲ್ಲಿ ಹಾಗೂ ಪಾಶ್ಚಾತ್ಯ ಸಂಗೀತ ಆಲಿಸುವಲ್ಲಿ ವಿಶೇಷ ಆಸಕ್ತಿ. ಇವರು 1965ರಲ್ಲಿ ಫೆಲೋರ್ನ ಎಂಬಾಕೆಯನ್ನು ವಿವಾಹವಾದರು. ಇವರಿಗೆ ಮಾರ್ಕ್ ಫೆರೀರಾ, ಪಾಲ್ ಫೆರೀರಾ ಎಂಬ ಇಬ್ಬರು ಮಕ್ಕಳಿದ್ದಾರೆ.

ಫೆರೀರಾ ಅವರು ತಮ್ಮ 15ನೆಯ ವಯಸ್ಸಿನಿಂದಲೇ ಬಿಲಿಯಡ್ರ್ಸ್ ಆಟ ಆಡಲು ಪ್ರಾರಂಭಿಸಿದರು. ಕಾಲೇಜಿನಲ್ಲಿ ಓದುತ್ತಿದ್ದಾಗ ಕ್ರಿಕೆಟ್, ಟೇಬಲ್ ಟೆನಿಸ್ ಹಾಗೂ ಬಿಲಿಯಡ್ರ್ಸ್ ಆಡುತ್ತಿದ್ದರು. ವಿಲ್ಸನ್ ಜಾನ್ ಎಂಬವರ ಬಳಿ ಇವರು ಬಿಲಿಯಡ್ರ್ಸ್ ತರಬೇತಿ ಪಡೆದರು. ಇವರಿಗೆ ಬಿಲಿಯಡ್ರ್ಸ್‍ನಲ್ಲಿ ಅನೇಕ ಬಹುಮಾನಗಳು ಲಭಿಸಿವೆ. ಮಹಾರಾಷ್ಟ್ರದ ಛತ್ರಪತಿ ಬಹುಮಾನ (1970), ಅರ್ಜುನ ಪ್ರಶಸ್ತಿ (1973), ನ್ಯೂಜಿûಲೆಂಡಿನ ಕೈಸ್ಟ್ ಚರ್ಚಿನ ವಲ್ರ್ಡ್ ಚಾಂಪಿಯನ್‍ಷಿಪ್ (1977), ಮೆಲ್ಬೋರ್ನ್ ವಲ್ರ್ಡ್ ಓಪನ್ ಚಾಂಪಿಯನ್‍ಷಿಪ್(1977), ಅಮೆಚೂರ್ ಬಿಲಿಯಡ್ರ್ಸ್ ಚಾಂಪಿಯನ್‍ಷಿಪ್ ಪಂದ್ಯದಲ್ಲಿ ಮೂರು ಬಾರಿ ವರ್ಷದ ಕ್ರೀಡಾಪಟು ಎಂಬ ಬಿರುದು, ವರ್ಷದ ಪ್ರಮುಖ ವ್ಯಕ್ತಿ ಎಂಬ ಬಿರುದುಗಳು, ಇಂಗ್ಲೆಂಡಿನ ಗ್ರಿಂಬ್ಸಿ ಪ್ರಶಸ್ತಿ (1989) - ಇವುಗಳ ಜೊತೆ ನವದೆಹಲಿ (1981) ಮತ್ತು ಮಾಲ್ಟ್ (1981) ಪಂದ್ಯ ಪ್ರಶಸ್ತಿಗಳೂ ಇವರಿಗೆ ಲಭ್ಯವಾಗಿವೆ. 1984 ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. 

1978ರಲ್ಲಿ ಕಲ್ಕತ್ತದಲ್ಲಿ ಜರುಗಿದ 47ನೆಯ ರಾಷ್ಟ್ರೀಯ ಬಿಲಿಯಡ್ರ್ಸ್ ಪಂದ್ಯದಲ್ಲಿ 1,149 ಪಾಯಿಂಟುಗಳ ಹಿಂದಿನ ದಾಖಲೆಯನ್ನು ಮುರಿದು ಇವರು ವಿಶ್ವದಾಖಲೆಯನ್ನು ಸ್ಥಾಪಿಸಿದ್ದಾರೆ. 	 
	      								(ಆರ್. ಎಮ್. ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ